Trust img
Select City
ವೀರ್ಯದ ಪ್ರಮಾಣ ಕಡಿಮೆಯಾಗಿರುವುದು (ಹೈಪೋಸ್ಪರ್ಮಿಯಾ): ಲಕ್ಷಣಗಳು, ಕಾರಣಗಳು, ರೋಗನಿರ್ಣಯ ಮತ್ತು ಚಿಕಿತ್ಸೆ

ವೀರ್ಯದ ಪ್ರಮಾಣ ಕಡಿಮೆಯಾಗಿರುವುದು (ಹೈಪೋಸ್ಪರ್ಮಿಯಾ): ಲಕ್ಷಣಗಳು, ಕಾರಣಗಳು, ರೋಗನಿರ್ಣಯ ಮತ್ತು ಚಿಕಿತ್ಸೆ

doctor image
Dr. Prachi Benara

MBBS (Gold Medalist), MS (OBG), DNB (OBG), PG Diploma in Reproductive and Sexual health

16 Years of experience

Table of Contents

ನೀವು ಅಥವಾ ನಿಮ್ಮ ಸಂಗಾತಿ ಸ್ವಲ್ಪ ಸಮಯದಿಂದ ಗರ್ಭಧಾರಣೆಗೆ ಪ್ರಯತ್ನಿಸುತ್ತಿದ್ದೀರಾ, ಆದರೆ ಫಲಿತಾಂಶ ಸಿಗುತ್ತಿಲ್ಲವೇ? ಆಗ ಸಾಮಾನ್ಯವಾಗಿ ಎಲ್ಲರ ಗಮನ ಹೋಗುವುದು ವೀರ್ಯಾಣುಗಳ ಸಂಖ್ಯೆಯ ಕಡೆಗೆ. ಆದರೆ ಒಂದು ಸಂಗತಿ ಬಹಳಷ್ಟು ಜನರಿಗೆ ಗೊತ್ತಿರುವುದಿಲ್ಲ – ಪ್ರತಿ ಸ್ಖಲನದಲ್ಲಿ ಹೊರಬರುವ ವೀರ್ಯದ ದ್ರವದ ಪ್ರಮಾಣವೂ ಅಷ್ಟೇ ಮುಖ್ಯ. ಇದು ಕಡಿಮೆಯಿದ್ದರೆ, ವೈದ್ಯಕೀಯ ಭಾಷೆಯಲ್ಲಿ ಇದನ್ನು ಹೈಪೋಸ್ಪರ್ಮಿಯಾ ಎನ್ನುತ್ತಾರೆ.

ಗಾಬರಿಯಾಗುವ ಅಗತ್ಯವಿಲ್ಲ. ಈ ಸ್ಥಿತಿಯಲ್ಲಿ ಸಾಮಾನ್ಯವಾಗಿ ನೋವು ಇರುವುದಿಲ್ಲ, ಹೊರಗಿನಿಂದ ಏನೂ ಗೊತ್ತಾಗುವುದೂ ಇಲ್ಲ – ಹಾಗಾಗಿಯೇ ಹೆಚ್ಚಿನ ಪುರುಷರಿಗೆ ಇದು ತಿಳಿಯುವುದೇ ವೀರ್ಯ ಪರೀಕ್ಷೆ ಮಾಡಿಸಿದಾಗ ಮಾತ್ರ. ಇದಕ್ಕೆ ಕಾರಣವೇನು, ಯಾವಾಗ ಚಿಂತಿಸಬೇಕು, ಮತ್ತು ಪರಿಹಾರವೇನು – ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿ ಸರಳವಾಗಿ ಉತ್ತರ ನೋಡೋಣ.

ವೀರ್ಯದ ಪ್ರಮಾಣ ಕಡಿಮೆಯಾಗುವುದು ಎಂದರೇನು?

ಸರಳವಾಗಿ ಹೇಳುವುದಾದರೆ, ಲೈಂಗಿಕ ಚಟುವಟಿಕೆ ಅಥವಾ ಹಸ್ತಮೈಥುನದ ವೇಳೆ ಪುರುಷರು ಸ್ಖಲಿಸುವ ವೀರ್ಯದ ಪ್ರಮಾಣ ಸಾಮಾನ್ಯಕ್ಕಿಂತ ಕಡಿಮೆ ಇರುವ ಸ್ಥಿತಿ ಇದು. ಇದನ್ನೇ ವೈದ್ಯಕೀಯ ಭಾಷೆಯಲ್ಲಿ ಹೈಪೋಸ್ಪರ್ಮಿಯಾ ಎನ್ನುತ್ತಾರೆ. ಫಲವತ್ತತೆ ಬಗ್ಗೆ ಮಾತನಾಡುವಾಗ ಜನ ಸಾಮಾನ್ಯವಾಗಿ ವೀರ್ಯಾಣುಗಳ ಸಂಖ್ಯೆಯ ಬಗ್ಗೆ ಮಾತ್ರ ಚಿಂತಿಸುತ್ತಾರೆ. ಆದರೆ ಪ್ರಮಾಣದ ಬಗ್ಗೆಯೂ ಅಷ್ಟೇ ಗಮನ ಕೊಡಬೇಕು.

ಸಾಮಾನ್ಯ ವೀರ್ಯದ ಪ್ರಮಾಣ ಎಷ್ಟು?

ಇಲ್ಲಿ ಒಂದು ಪ್ರಶ್ನೆ ಸಹಜ – ಎಷ್ಟಿದ್ದರೆ ಸಾಮಾನ್ಯ ಎನ್ನಬಹುದು? ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳ ಪ್ರಕಾರ, ಆರೋಗ್ಯವಂತ ಪುರುಷನ ಸಾಮಾನ್ಯ ವೀರ್ಯದ ಪ್ರಮಾಣ 1.5 ಮಿಲಿಲೀಟರ್‌ನಿಂದ 5.0 ಮಿಲಿಲೀಟರ್‌ವರೆಗೆ ಇರುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೊಂದಿದೆ – ಈ ಪ್ರಮಾಣ ಪ್ರತಿ ಬಾರಿಯೂ ನಿಖರವಾಗಿ ಒಂದೇ ಇರುವುದಿಲ್ಲ.

  • ನೀರಿನಂಶ, ಒತ್ತಡ, ಹಾರ್ಮೋನ್ ಮಟ್ಟ, ಕೊನೆಯ ಸ್ಖಲನದ ನಂತರ ಕಳೆದ ಸಮಯ – ಇವೆಲ್ಲ ಸಣ್ಣಪುಟ್ಟ ಏರಿಳಿತಕ್ಕೆ ಕಾರಣವಾಗಬಹುದು, ಮತ್ತು ಇದು ಸಹಜ.
  • ಆದರೆ ಪ್ರಮಾಣ ಪ್ರತಿ ಬಾರಿಯೂ 1.5 ಮಿಲಿಲೀಟರ್‌ಗಿಂತ ಸತತವಾಗಿ ಕಡಿಮೆಯಿದ್ದರೆ ಮಾತ್ರ ಗಮನ ಕೊಡಬೇಕು.

ಕಡಿಮೆ ವೀರ್ಯದ ಪ್ರಮಾಣ ಮತ್ತು ಕಡಿಮೆ ವೀರ್ಯಾಣು ಸಂಖ್ಯೆ ನಡುವಿನ ವ್ಯತ್ಯಾಸವೇನು?

ಇವೆರಡೂ ಒಂದೇ ಎಂದು ಚಿಕಿತ್ಸೆಗೆ ಬರುವ ಅನೇಕರು ತಪ್ಪಾಗಿ ಭಾವಿಸುತ್ತಾರೆ. ನಿಜ ಹೇಳಬೇಕೆಂದರೆ, ವೈದ್ಯಕೀಯವಾಗಿ ಇವು ಬೇರೆ ಬೇರೆಯೇ ಸಮಸ್ಯೆಗಳು.

  • ವೀರ್ಯದ ಪ್ರಮಾಣ ಕಡಿಮೆಯಾಗಿರುವುದು ಎಂದರೆ ಸ್ಖಲನದ ವೇಳೆ ಹೊರಬರುವ ದ್ರವದ ಒಟ್ಟು ಪ್ರಮಾಣ ಕಡಿಮೆ ಇರುವುದು.
  • ಕಡಿಮೆ ವೀರ್ಯಾಣು ಸಂಖ್ಯೆ ಎಂದರೆ ದ್ರವದ ಪ್ರಮಾಣ ಸಾಮಾನ್ಯವೇ ಇರಬಹುದು, ಆದರೆ ಅದರೊಳಗಿನ ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುವುದು.

ಕಡಿಮೆ ವೀರ್ಯದ ಪ್ರಮಾಣದ ಲಕ್ಷಣಗಳು ಯಾವುವು?

ಈ ಸ್ಥಿತಿ ಇರುವ ಬಹುತೇಕರಿಗೆ ಯಾವುದೇ ನೋವು ಇರುವುದಿಲ್ಲ, ಹೊರಗಿನಿಂದ ಏನೂ ಗೊತ್ತಾಗುವುದೂ ಇಲ್ಲ. ಆದರೆ ಸ್ವಲ್ಪ ಗಮನವಿಟ್ಟರೆ ಕೆಲವು ಸೂಚನೆಗಳು ಸಿಗುತ್ತವೆ.

  • ಸ್ಖಲನದ ವೇಳೆ ದ್ರವದ ಪ್ರಮಾಣ ಕಣ್ಣಿಗೆ ಕಾಣುವಷ್ಟು ಕಡಿಮೆ.
  • ಸಾಕಷ್ಟು ಪ್ರಯತ್ನಪಟ್ಟರೂ ಗರ್ಭಧಾರಣೆ ಆಗುತ್ತಿಲ್ಲ – ಏಕೆಂದರೆ ವೀರ್ಯಾಣುಗಳಿಗೆ ಅಂಡಾಣು ತಲುಪುವುದೇ ಕಷ್ಟವಾಗುತ್ತದೆ.
  • ಸ್ಖಲನದ ಸಮಯದಲ್ಲಿ ಸ್ವಲ್ಪ ನೋವು ಅಥವಾ ಉರಿ.
  • ಲೈಂಗಿಕ ಆಸಕ್ತಿ ಕಡಿಮೆಯಾಗುವುದು, ಸಂಪೂರ್ಣ ತೃಪ್ತಿ ಸಿಗದಿರುವುದು – ಹಾರ್ಮೋನ್ ಏರುಪೇರು ಇದಕ್ಕೆ ಕಾರಣವಿರಬಹುದು.
  • ಕೆಲವರಿಗೆ ವೀರ್ಯ ತೆಳುವಾಗಿ, ನೀರಿನಂತೆ ಕಾಣಿಸಬಹುದು.

ವೀರ್ಯಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳು ಯಾವುವು?

ಪ್ರಮಾಣ ಒಂದೇ ಇಲ್ಲಿ ಸಮಸ್ಯೆಯಲ್ಲ. ಗುಣಮಟ್ಟಕ್ಕೆ ಸಂಬಂಧಿಸಿದ ಬೇರೆ ಸಮಸ್ಯೆಗಳೂ ಆಗಾಗ ಜೊತೆಗೆ ಕಾಣಿಸಿಕೊಳ್ಳುತ್ತವೆ.

ಕಡಿಮೆ ವೀರ್ಯಾಣು ಸಂಖ್ಯೆ ಅಥವಾ ದುರ್ಬಲ ವೀರ್ಯ

ದ್ರವದ ಪ್ರಮಾಣ ಸಾಮಾನ್ಯವಿದ್ದರೂ, ಅದರಲ್ಲಿನ ವೀರ್ಯಾಣುಗಳ ಸಂಖ್ಯೆ ಕಡಿಮೆಯಿರಬಹುದು. ಚಲನಶೀಲತೆ ಕಡಿಮೆಯಿದ್ದರೂ, ಆಕಾರ ಅಸಹಜವಾಗಿದ್ದರೂ ಇದು ಫಲವತ್ತತೆಗೆ ಧಕ್ಕೆ ತರುತ್ತದೆ.

ವೀರ್ಯಾಣುಗಳ ಸಂಖ್ಯೆ ಹೆಚ್ಚಿಸುವ ಮಾರ್ಗಗಳ ಬಗ್ಗೆ ಇಲ್ಲಿ ಓದಬಹುದು.

ಸೋಂಕುಗಳು

ಪ್ರಾಸ್ಟೇಟ್, ವೃಷಣ ಅಥವಾ ವೀರ್ಯ ಸಾಗಿಸುವ ನಾಳಗಳಿಗೆ ಸೋಂಕು ತಗುಲುವುದೂ ಉಂಟು. ಬ್ಯಾಕ್ಟೀರಿಯಾ ಇರಬಹುದು, ಅಥವಾ ಲೈಂಗಿಕವಾಗಿ ಹರಡುವ ಸೋಂಕುಗಳಿರಬಹುದು – ಎರಡೂ ವೀರ್ಯದ ಹರಿವಿಗೆ ಅಡ್ಡಿಪಡಿಸುತ್ತವೆ ಮತ್ತು ವೀರ್ಯಾಣುಗಳ ಜೀವಿತಾವಧಿಯನ್ನೂ ಕುಗ್ಗಿಸುತ್ತವೆ.

ಇತರ ಆರೋಗ್ಯ ಸಮಸ್ಯೆಗಳು

ಟೆಸ್ಟೋಸ್ಟೆರಾನ್ ಪುರುಷರ ಪ್ರಮುಖ ಹಾರ್ಮೋನ್ ಎನ್ನುವುದು ಬಹುತೇಕರಿಗೆ ಗೊತ್ತು. ಇದರ ಮಟ್ಟ ಕುಸಿದಾಗ ವೀರ್ಯ ಉತ್ಪಾದನೆಗೆ ನೇರ ಹೊಡೆತ ಬೀಳುತ್ತದೆ. ಇನ್ನೊಂದೆಡೆ, ನಾಳಗಳಲ್ಲಿ ಅಡಚಣೆಯಿದ್ದರೆ ವೀರ್ಯ ಸರಾಗವಾಗಿ ಹೊರಬರುವುದಿಲ್ಲ. ಮಧುಮೇಹ, ಅಧಿಕ ರಕ್ತದೊತ್ತಡ, ನರಗಳ ದೌರ್ಬಲ್ಯದಂತಹ ದೀರ್ಘಕಾಲದ ಕಾಯಿಲೆಗಳೂ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಇಂತಹ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದೇ ಮೊದಲ ಹೆಜ್ಜೆ.

ವೀರ್ಯದ ಪ್ರಮಾಣ ಕಡಿಮೆಯಾಗಲು ಕಾರಣಗಳೇನು?

ಇಲ್ಲಿ ಕಾರಣಗಳನ್ನು ಎರಡು ಗುಂಪುಗಳಾಗಿ ನೋಡಬಹುದು – ಒಂದು ಜೀವನಶೈಲಿಗೆ ಸಂಬಂಧಿಸಿದ್ದು, ಇನ್ನೊಂದು ವೈದ್ಯಕೀಯ ಅಥವಾ ದೈಹಿಕ ಕಾರಣಗಳಿಗೆ.

ಜೀವನಶೈಲಿ ಮತ್ತು ವರ್ತನೆಯ ಅಂಶಗಳು

  • ಧೂಮಪಾನ, ಮದ್ಯಪಾನ: ನಿಯಮಿತವಾಗಿ ಸೇವಿಸುತ್ತಿದ್ದರೆ ವೀರ್ಯ ಉತ್ಪಾದಿಸುವ ಗ್ರಂಥಿಗಳಿಗೇ ಹಾನಿಯಾಗುತ್ತದೆ.
  • ಮಾದಕ ದ್ರವ್ಯ, ಕೆಲವು ಔಷಧಿಗಳು: ಗುಣಮಟ್ಟ ಮತ್ತು ಪ್ರಮಾಣ ಎರಡನ್ನೂ ಕುಗ್ಗಿಸಬಲ್ಲವು.
  • ಒತ್ತಡ, ನಿದ್ರಾಹೀನತೆ: ಹಾರ್ಮೋನ್ ಸಮತೋಲನವನ್ನೇ ಏರುಪೇರು ಮಾಡಿಬಿಡುತ್ತವೆ.
  • ಬೊಜ್ಜು, ಜಂಕ್ ಫುಡ್: ಲೈಂಗಿಕ ಆರೋಗ್ಯದ ಮೇಲೆ ನಿಧಾನವಾಗಿ ಕೆಟ್ಟ ಪರಿಣಾಮ ಬೀರುತ್ತವೆ.
  • ಪದೇ ಪದೇ ಸ್ಖಲನ: ಅಲ್ಪಾವಧಿಯಲ್ಲಿ ಪ್ರಮಾಣ ತಾತ್ಕಾಲಿಕವಾಗಿ ಇಳಿಯುವುದು ಸಹಜ.

ವೈದ್ಯಕೀಯ ಮತ್ತು ದೈಹಿಕ ಕಾರಣಗಳು

ಜೀವನಶೈಲಿ ಸರಿಯಿದ್ದರೂ ಸಮಸ್ಯೆ ಮುಂದುವರಿದರೆ, ಈ ಕೆಳಗಿನ ಕಾರಣಗಳನ್ನೂ ಪರಿಶೀಲಿಸಬೇಕಾಗಬಹುದು.

  • ರಿಟ್ರೋಗ್ರೇಡ್ ಎಜಾಕ್ಯುಲೇಷನ್ ಎಂಬ ಸ್ಥಿತಿಯಲ್ಲಿ ವೀರ್ಯ ಹೊರಗೆ ಬರದೆ ಮೂತ್ರಕೋಶದೊಳಗೆ ಹೋಗುತ್ತದೆ.
  • ಹಾರ್ಮೋನ್ ಅಸಮತೋಲನ: ಟೆಸ್ಟೋಸ್ಟೆರಾನ್ ಕುಸಿದರೆ ವೀರ್ಯಾಣು ಉತ್ಪಾದನೆಗೆ ಹೊಡೆತ ಬೀಳುತ್ತದೆ.
  • ಅಡಚಣೆಗಳು: ಹುಟ್ಟಿನಿಂದಲೇ ಇರುವ, ಅಥವಾ ಸೋಂಕಿನಿಂದ ಉಂಟಾದ ತಡೆಗಳು ವೀರ್ಯದ ಹರಿವಿಗೆ ಅಡ್ಡಿಯಾಗಬಹುದು.
  • ಹಿಂದಿನ ಶಸ್ತ್ರಚಿಕಿತ್ಸೆ: ಪ್ರಾಸ್ಟೇಟ್ ಅಥವಾ ಮೂತ್ರನಾಳದ ಸರ್ಜರಿ ನರ ಅಥವಾ ನಾಳಕ್ಕೆ ಹಾನಿ ಮಾಡಿರುವ ಸಾಧ್ಯತೆಯೂ ಇದೆ.
  • ವಯಸ್ಸು: ವಯಸ್ಸಾದಂತೆ ಪ್ರಾಸ್ಟೇಟ್ ಕಾರ್ಯನಿರ್ವಹಣೆ ತಾನಾಗಿಯೇ ಸ್ವಲ್ಪ ಕುಸಿಯುತ್ತದೆ.
  • ದೀರ್ಘಕಾಲದ ಕಾಯಿಲೆಗಳು: ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ನರಗಳ ಮೇಲೆ ಪರಿಣಾಮ ಬೀರಿ, ಸ್ಖಲನ ಪ್ರಕ್ರಿಯೆಗೇ ತೊಂದರೆ ಕೊಡಬಹುದು.

ಕಡಿಮೆ ವೀರ್ಯದ ಪ್ರಮಾಣವು ಯಾವುದೇ ಗಂಭೀರ ಆರೋಗ್ಯ ಸಮಸ್ಯೆಯ ಲಕ್ಷಣವಾಗಿರಬಹುದೇ?

ಇದೊಂದು ಸಹಜ ಪ್ರಶ್ನೆ. ವೀರ್ಯ ಮುಖ್ಯವಾಗಿ ಪ್ರಾಸ್ಟೇಟ್ ಮತ್ತು ಸೆಮಿನಲ್ ವೆಸಿಕಲ್‌ಗಳಿಂದ ಉತ್ಪತ್ತಿಯಾಗುವುದರಿಂದ, ಪ್ರಮಾಣ ಇದ್ದಕ್ಕಿದ್ದಂತೆ ಅಥವಾ ನಿರಂತರ ಕಡಿಮೆಯಾದರೆ ಗಮನ ಕೊಡುವುದು ಒಳ್ಳೆಯದು. ಇದು ಕೆಳಗಿನ ಸಮಸ್ಯೆಗಳ ಸೂಚನೆಯಾಗಿರುವ ಸಾಧ್ಯತೆಯೂ ಇದೆ.

  • ಹಾರ್ಮೋನ್ ಏರುಪೇರು
  • ರಿಟ್ರೋಗ್ರೇಡ್ ಎಜಾಕ್ಯುಲೇಷನ್‌ನಂತಹ ಗಂಭೀರ ಸ್ಥಿತಿ
  • ಪ್ರಾಸ್ಟೇಟ್ ಅಥವಾ ಸೆಮಿನಲ್ ವೆಸಿಕಲ್‌ನಲ್ಲಿ ದೀರ್ಘಕಾಲದ ಸೋಂಕು ಅಥವಾ ತಡೆ
  • ನರಸಂಬಂಧಿ ಸಮಸ್ಯೆ

ಕಡಿಮೆ ವೀರ್ಯದ ಪ್ರಮಾಣವನ್ನು ಹೇಗೆ ಪತ್ತೆ ಹಚ್ಚಲಾಗುತ್ತದೆ?

ಒಳ್ಳೆಯ ಸುದ್ದಿ ಏನೆಂದರೆ, ಇದನ್ನು ಖಚಿತಪಡಿಸುವ ಪರೀಕ್ಷೆಗಳು ಸರಳ ಮತ್ತು ನೋವುರಹಿತ. ವೈದ್ಯರು ಸಾಮಾನ್ಯವಾಗಿ ಈ ಕೆಳಗಿನವುಗಳನ್ನು ಸೂಚಿಸುತ್ತಾರೆ.

  • ವೀರ್ಯ ಪರೀಕ್ಷೆ (ಸೆಮೆನ್ ಅನಾಲಿಸಿಸ್): ಇದೇ ಮೊದಲ ಮತ್ತು ಮುಖ್ಯ ಪರೀಕ್ಷೆ. ವೀರ್ಯದ ಮಾದರಿ ಸಂಗ್ರಹಿಸಿ, ಪ್ರಮಾಣ, ಸಂಖ್ಯೆ, ಚಲನಶೀಲತೆ ಮತ್ತು ಆಕಾರವನ್ನು ಪ್ರಯೋಗಾಲಯದಲ್ಲಿ ಪರಿಶೀಲಿಸಲಾಗುತ್ತದೆ.
  • ಹಾರ್ಮೋನ್ ಪರೀಕ್ಷೆಗಳು: ರಕ್ತ ಪರೀಕ್ಷೆಯ ಮೂಲಕ ಟೆಸ್ಟೋಸ್ಟೆರಾನ್ ಮಟ್ಟ ಸಾಮಾನ್ಯ ವ್ಯಾಪ್ತಿಯಲ್ಲಿದೆಯೇ ಎಂದು ಪರಿಶೀಲಿಸಲಾಗುತ್ತದೆ. ಇಲ್ಲಿ ಏರುಪೇರಿದ್ದರೆ, ಅದು ವೀರ್ಯ ಉತ್ಪಾದನೆಯ ಮೇಲೆ ನೇರ ಪರಿಣಾಮ ಬೀರುತ್ತದೆ.
  • ಸ್ಖಲನದ ನಂತರದ ಮೂತ್ರ ಪರೀಕ್ಷೆ: ರಿಟ್ರೋಗ್ರೇಡ್ ಎಜಾಕ್ಯುಲೇಷನ್ ಇರಬಹುದೆಂಬ ಅನುಮಾನವಿದ್ದರೆ ಮಾತ್ರ ಈ ಪರೀಕ್ಷೆ ಬೇಕಾಗುತ್ತದೆ. ಮೂತ್ರದಲ್ಲಿ ವೀರ್ಯಾಣು ಪತ್ತೆಯಾದರೆ ಈ ಸ್ಥಿತಿ ಖಚಿತವಾಗುತ್ತದೆ.
  • ಅಲ್ಟ್ರಾಸೌಂಡ್ ಸ್ಕ್ಯಾನ್: ಪ್ರಾಸ್ಟೇಟ್, ಸೆಮಿನಲ್ ವೆಸಿಕಲ್ ಅಥವಾ ವೃಷಣಗಳಲ್ಲಿ ಸೋಂಕು, ಗಂಟು ಅಥವಾ ತಡೆ ಇದೆಯೇ ಎಂದು ಇದರಿಂದ ಗೊತ್ತಾಗುತ್ತದೆ.

ಕಡಿಮೆ ವೀರ್ಯದ ಪ್ರಮಾಣಕ್ಕೆ ಚಿಕಿತ್ಸಾ ವಿಧಾನಗಳು ಯಾವುವು?

ಚಿಕಿತ್ಸೆ ಒಂದೇ ರೀತಿ ಇರುವುದಿಲ್ಲ – ಕಾರಣಕ್ಕೆ ತಕ್ಕಂತೆ ಬದಲಾಗುತ್ತದೆ. ಸಾಮಾನ್ಯವಾಗಿ ಮೂರು ಹಂತಗಳಲ್ಲಿ ಇದನ್ನು ನೋಡಬಹುದು.

ಜೀವನಶೈಲಿ ಬದಲಾವಣೆಗಳು

ಹೆಚ್ಚಿನ ಸಂದರ್ಭಗಳಲ್ಲಿ, ಆರಂಭಿಕ ಹಂತದ ಸಮಸ್ಯೆಗೆ ಇಷ್ಟು ಸಾಕಾಗುತ್ತದೆ.

  • ಧೂಮಪಾನ, ಮದ್ಯಪಾನ ಬಿಡುವುದು
  • ಹಸಿರು ತರಕಾರಿ, ಹಣ್ಣು, ಒಮೆಗಾ-3, ವಿಟಮಿನ್ ಸಿ ಸೇವನೆ
  • ತೂಕ ನಿಯಂತ್ರಣ, ನಿಯಮಿತ ವ್ಯಾಯಾಮ ಅಥವಾ ಯೋಗ
  • ಸಾಕಷ್ಟು ನಿದ್ದೆ, ಒತ್ತಡ ನಿರ್ವಹಣೆ

ವೈದ್ಯಕೀಯ ಚಿಕಿತ್ಸೆ

ಇಷ್ಟರಿಂದಲೂ ಸುಧಾರಣೆ ಕಾಣದಿದ್ದರೆ ಚಿಂತೆ ಬೇಡ, ಮುಂದಿನ ಹಂತವಿದೆ.

  • ಹಾರ್ಮೋನ್ ಅಸಮತೋಲನಕ್ಕೆ ಥೆರಪಿ ಅಥವಾ ಔಷಧಿ
  • ಸೋಂಕಿಗೆ ಸೂಕ್ತ ಆಂಟಿಬಯೋಟಿಕ್
  • ರಿಟ್ರೋಗ್ರೇಡ್ ಎಜಾಕ್ಯುಲೇಷನ್‌ಗೆ ನಿರ್ದಿಷ್ಟ ಔಷಧಿ

ಸಹಾಯಕಾರಿ ಸಂತಾನೋತ್ಪತ್ತಿ ತಂತ್ರಜ್ಞಾನಗಳು (ART)

ಮೇಲಿನ ಯಾವುದೂ ಫಲ ಕೊಡದಿದ್ದರೆ, ART ಇನ್ನೂ ಒಂದು ಆಶಾದಾಯಕ ದಾರಿ.

  • IUI (ಇಂಟ್ರಾ ಯುಟೆರಿನ್ ಇನ್ಸೆಮಿನೇಷನ್): ವೀರ್ಯವನ್ನು ನೇರವಾಗಿ ಗರ್ಭಕೋಶಕ್ಕೆ ಸೇರಿಸುವ ವಿಧಾನ.
  • IVF / ICSI: ಪ್ರಮಾಣ ಅಥವಾ ಗುಣಮಟ್ಟ ತೀರಾ ಕಡಿಮೆಯಿದ್ದಾಗ ಬಳಸುವ ಅತ್ಯಂತ ಯಶಸ್ವಿ ವಿಧಾನ. ಆರೋಗ್ಯಕರ ವೀರ್ಯವನ್ನು ಆಯ್ಕೆ ಮಾಡಿ, ಪ್ರಯೋಗಾಲಯದಲ್ಲಿ ಅಂಡಾಣುವಿನೊಂದಿಗೆ ಸಂಯೋಜಿಸಲಾಗುತ್ತದೆ.

ಕಡಿಮೆ ವೀರ್ಯದ ಪ್ರಮಾಣವು ಪುರುಷರ ಫಲವತ್ತತೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಇದು ನೇರ ಮತ್ತು ಗಮನಾರ್ಹ ಪರಿಣಾಮ. ಮೂರು ರೀತಿಯಲ್ಲಿ ಇದನ್ನು ಅರ್ಥಮಾಡಿಕೊಳ್ಳಬಹುದು.

  • ಪೋಷಣೆ ಕೊರತೆ: ವೀರ್ಯ ದ್ರವ ವೀರ್ಯಾಣುಗಳಿಗೆ ರಕ್ಷಣೆ ನೀಡುತ್ತದೆ. ದ್ರವ ಕಡಿಮೆಯಿದ್ದರೆ ಅವುಗಳಿಗೆ ಸಾಕಷ್ಟು ಪೋಷಣೆ ಸಿಗುವುದಿಲ್ಲ.
  • ಅಂಡಾಣು ತಲುಪುವಲ್ಲಿ ತೊಂದರೆ: ಫಾಲೋಪಿಯನ್ ಟ್ಯೂಬ್‌ ಕಡೆಗೆ ಚಲಿಸುವ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಿ, ಫಲವತ್ತಾಗುವ ಸಾಧ್ಯತೆ ಇಳಿಯುತ್ತದೆ.
  • ಗರ್ಭಧಾರಣೆ ಸಾಧ್ಯತೆ ಕುಸಿತ: ಪ್ರಮಾಣ 1.5 ಮಿಲಿಲೀಟರ್‌ಗಿಂತ ಕಡಿಮೆಯಿದ್ದರೆ, ಸ್ವಾಭಾವಿಕ ಗರ್ಭಧಾರಣೆ ನಿಜಕ್ಕೂ ಕಷ್ಟವಾಗುತ್ತದೆ. ಇಂತಹ ಸಂದರ್ಭದಲ್ಲಿ ವೈದ್ಯರ ಸಲಹೆ ಪಡೆಯುವುದೇ ಉತ್ತಮ.

ತೀರ್ಮಾನ

ಒಂದು ಮಾತಿನಲ್ಲಿ ಹೇಳುವುದಾದರೆ, ಹೈಪೋಸ್ಪರ್ಮಿಯಾ ಬಗೆಹರಿಸಲಾಗದ ಸಮಸ್ಯೆಯಲ್ಲ. ಆರು ತಿಂಗಳಿಗೂ ಹೆಚ್ಚು ಕಾಲ ಗರ್ಭಧಾರಣೆ ಆಗದಿದ್ದರೆ, ಅಥವಾ ವೀರ್ಯದ ಪ್ರಮಾಣ ಸತತವಾಗಿ ಕಡಿಮೆಯಿದ್ದರೆ, ವೈದ್ಯರನ್ನು ಭೇಟಿಯಾಗಿ ವೀರ್ಯ ವಿಶ್ಲೇಷಣೆ ಮಾಡಿಸಿಕೊಳ್ಳುವುದೇ ಮೊದಲ ಹೆಜ್ಜೆ. ಬೇಗ ಪತ್ತೆಯಾದಷ್ಟೂ ಚಿಕಿತ್ಸೆ ಸುಲಭ, ಮತ್ತು ಸೂಕ್ತ ಚಿಕಿತ್ಸೆ ಹಾಗೂ ಜೀವನಶೈಲಿ ಬದಲಾವಣೆಯಿಂದ ಈ ಸಮಸ್ಯೆಯನ್ನು ಸರಿಪಡಿಸಿಕೊಳ್ಳುವುದು, ಪಿತೃತ್ವದ ಕನಸನ್ನು ನನಸು ಮಾಡಿಕೊಳ್ಳುವುದು ಖಂಡಿತ ಸಾಧ್ಯ.

ಪುರುಷರ ಬಂಜೆತನದ ಬಗ್ಗೆ ಇನ್ನಷ್ಟು ತಿಳಿಯಲು ಅಥವಾ ತಜ್ಞರ ಸಲಹೆಗೆ, ಬಿರ್ಲಾ ಫರ್ಟಿಲಿಟಿ & ಐವಿಎಫ್ ಅನ್ನು ಸಂಪರ್ಕಿಸಬಹುದು.

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು

  • ಹೈಪೋಸ್ಪರ್ಮಿಯಾವನ್ನು ಹೇಗೆ ರೋಗನಿರ್ಣಯ ಮಾಡಲಾಗುತ್ತದೆ?

ಸೆಮೆನ್ ಅನಾಲಿಸಿಸ್ ಪರೀಕ್ಷೆಯೊಂದೇ ಸಾಕು. ಇದರಿಂದ ವೀರ್ಯದ ಪ್ರಮಾಣ ಮತ್ತು ಗುಣಮಟ್ಟ ಎರಡೂ ಪತ್ತೆಯಾಗುತ್ತವೆ.

  • ಔಷಧಿಗಳಿಲ್ಲದೆ ಕಡಿಮೆ ವೀರ್ಯದ ಪ್ರಮಾಣವನ್ನು ಸುಧಾರಿಸಬಹುದೇ?

ಹೌದು, ಸಾಧ್ಯ. ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ, ಧೂಮಪಾನ ತ್ಯಜಿಕೆ ಮತ್ತು ಸಾಕಷ್ಟು ನೀರಿನ ಸೇವನೆಯಿಂದ ಇದು ನೈಸರ್ಗಿಕವಾಗಿಯೇ ಸುಧಾರಿಸಬಹುದು.

  • ಕಡಿಮೆ ವೀರ್ಯದ ಪ್ರಮಾಣವು ಯಾವಾಗಲೂ ಬಂಜೆತನವನ್ನೇ ಸೂಚಿಸುತ್ತದೆಯೇ?

ಇಲ್ಲ, ಹಾಗೇನಿಲ್ಲ. ಪ್ರಮಾಣ ಕಡಿಮೆಯಿದ್ದರೂ, ಅದರಲ್ಲಿ ಆರೋಗ್ಯಕರ ವೀರ್ಯಾಣುಗಳು ಸಾಕಷ್ಟಿದ್ದರೆ ಗರ್ಭಧಾರಣೆ ಸಾಧ್ಯ. ಫಲವತ್ತತೆಯ ಮೇಲೆ ಸ್ವಲ್ಪ ಮಟ್ಟಿನ ಪರಿಣಾಮ ಇರಬಹುದಷ್ಟೇ.

  • ರಿಟ್ರೋಗ್ರೇಡ್ ಎಜಾಕ್ಯುಲೇಷನ್ ಎಂದರೇನು ಮತ್ತು ಇದು ಕಡಿಮೆ ವೀರ್ಯದ ಪ್ರಮಾಣಕ್ಕೆ ಹೇಗೆ ಸಂಬಂಧಿಸಿದೆ?

ಇಲ್ಲಿ ಸ್ಖಲನದ ವೇಳೆ ವೀರ್ಯ ಹೊರಬರದೆ ಮೂತ್ರಕೋಶದ ಒಳಗೇ ಹೋಗುತ್ತದೆ, ಹಾಗಾಗಿ ಹೊರಗೆ ಬರುವ ಪ್ರಮಾಣ ತೀವ್ರವಾಗಿ ಕಡಿಮೆಯಾಗುತ್ತದೆ.

  • ಪ್ರತಿ ಸ್ಖಲನದ ನಡುವೆ ವೀರ್ಯದ ಪ್ರಮಾಣದಲ್ಲಿ ವ್ಯತ್ಯಾಸವಿರುವುದು ಸಾಮಾನ್ಯವೇ?

ಹೌದು, ಸಂಪೂರ್ಣ ಸಾಮಾನ್ಯ. ದೈಹಿಕ ಆಯಾಸ, ಆವರ್ತನ, ಹೈಡ್ರೇಷನ್ ಮಟ್ಟ ಮತ್ತು ಒತ್ತಡದಿಂದಾಗಿ ಇಂತಹ ಸ್ವಲ್ಪ ವ್ಯತ್ಯಾಸ ಆಗುತ್ತಿರುತ್ತದೆ.

To know more

Birla Fertility & IVF aims at transforming the future of fertility globally, through outstanding clinical outcomes, research, innovation and compassionate care.

Need Help?

Talk to our fertility experts

Had an IVF Failure?

Talk to our fertility experts